ನಿಃಸ್ವಾರ್ಥವಾದ
ಸ್ವಾರ್ಥವನ್ನು ತೊರೆದು ಪರಾರ್ಥಕ್ಕಾಗಿ ಮನುಷ್ಯ ಕರ್ಮವನ್ನೆಸಗಬೇಕು ಎಂಬ ವಾದ. ವೇದಕಾಲದಿಂದಲೂ ಭಾರತೀಯ ತತ್ತ್ವ ಶಾಸ್ತ್ರದಲ್ಲಿ ಇದು ಕಾಣಬರುತ್ತಿದೆ. ಸಮಾಜದ ಹಿತದಲ್ಲಿ ವ್ಯಕ್ತಿಯ ಹಿತ ಅಡಕವಾಗಿದೆ ಎಂಬುದನ್ನು ಪ್ರತಿಯೊಬ್ಬ ಬುದ್ಧಿಜೀವಿಯೂ ಒಪ್ಪುತ್ತಾನೆ. ಮಹಾಭಾರತದಲ್ಲಿ ಕುಲದ ಹಿತಕ್ಕಾಗಿ ವ್ಯಕ್ತಿಯೊಬ್ಬನನ್ನೂ ಗ್ರಾಮದ ಹಿತಕ್ಕಾಗಿ ಕುಲವನ್ನೂ ರಾಷ್ಟ್ರ ಹಿತಕ್ಕಾಗಿ ಗ್ರಾಮವೊಂದನ್ನು ಆತ್ಮಹಿತಕ್ಕಾಗಿ ಪೃಥ್ವಿಯನ್ನೂ ತ್ಯಜಿಸಬೇಕೆಂದು ಹೇಳಿದೆ. ನಿಃಸ್ವಾರ್ಥವಾದಕ್ಕೇ ಸಮಾಜವಾದ ಎಂದರೂ ತಪ್ಪಿಲ್ಲ. ಆತ್ಮ ಪರಮಾತ್ಮ ಸ್ವರ್ಗ ನರಕ ಮೋಕ್ಷ ಪುನರ್ಜನ್ಮ ಇತ್ಯಾದಿಗಳನ್ನು ಒಪ್ಪದಿದ್ದ ದಾರ್ಶನಿಕರು ಸಹ ಸಮಾಜಹಿತವನ್ನು ಕಡೆಗಣಿಸಿಲ್ಲ. ಹಾಗೆಯೆ ಸ್ವಾರ್ಥಕ್ಕೇ ಹೆಚ್ಚು ಮಹತ್ತ್ವ ಕೊಟ್ಟ ಚಾರ್ವಾಕ ಸಕಲರ ನಿಂದೆಗೂ ಪಾತ್ರನಾದ. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಅವನ ಹೇಳಿಕೆಯನ್ನು ಯಾವ ಸಮಾಜವಾದಿಯೂ ಒಪ್ಪಲಾರ. ಸಮಾಜ ಹಿತದಿಂದ ವ್ಯಕ್ತಿಸುಖವೂ ಉಂಟಾದರೆ ಅದರಿಂದ ನಿಃಸ್ವಾರ್ಥವಾದಕ್ಕೆ ಏನೂ ತೊಂದರೆ ಇಲ್ಲ. ತನ್ನ ಸುಖವನ್ನೇ ಬಲಿಕೊಟ್ಟು ಸಮಜದ ಹಿತಕ್ಕಾಗಿ ದುಡಿದರೆ ಅದು ಅತ್ಯಂತ ನಿಃಸ್ವಾರ್ಥ ಎಂದು ಪರಿಗಣಿಸಲ್ಪಡುತ್ತದೆ. ಸಕಲ ಧರ್ಮಗಳೂ ಸಮಾಜಹಿತಕ್ಕೇ ಹೆಚ್ಚು ಮಹತ್ತ್ವ ಕೊಟ್ಟಿವೆ. ಭಾರತೀಯ ಧರ್ಮಶಾಸ್ತ್ರಗಳಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಮನುಸ್ಮøತಿಯಲ್ಲಿ ಅಹಿಂಸೆ ಸತ್ಯ ಅಸ್ತೇಯ ಶೌಚ ಇಂದ್ರಿಯ ನಿಗ್ರಹ- ಇವು ಸಕಲರೂ ಅನುಸರಿಸಬೇಕಾದ ಧರ್ಮ ನಿಯಮ ಎಂದಿದೆ. ಕ್ರೈಸ್ತಧರ್ಮದಲ್ಲಿ ನೆರೆಯವರನ್ನು ತನ್ನಂತೆ ಪ್ರೀತಿಸು, ಕಳಬೇಡ, ವ್ಯಭಿಚಾರ ಮಾಡಬೇಡ ಇತ್ಯಾದಿ ನಿಯಮಗಳಿವೆ. ಮಹಮ್ಮದೀಯ ಧರ್ಮದಲ್ಲಿ ಮದ್ಯ ಸೇವಿಸಬಾರದು, ದಾನಧರ್ಮಾಧಿಗಳನ್ನು ಆಚರಿಸಲೇಬೇಕು ಇತ್ಯಾದಿ ನಿಯಮಗಳಿವೆ. ಬುದ್ಧನಂತೂ ಬಹುಜನ ಹಿತಾಯ ಬಹುಜನ ಸಹಾಯ ಎಂದು ಸಾರಿ ಸಾರಿ ಹೇಳಿದ್ದಾನೆ. ಜೈನರಲ್ಲಿಯೂ ಅಹಿಂಸೆಯೇ ಪರಮ ಧರ್ಮವಾಗಿದೆ. ಅದು ಸಮಾಜ ಹಿತಕ್ಕಾಗಿಯೇ ಇದೇ. ಕನ್‍ಫ್ಯೂಷಸನು ನಿನಗೆ ಇತರರು ಏನು ಮಾಡಬಾರದೆಂದು ಬಯಸುವೆಯೋ ಅದನ್ನು ನೀನು ಇತರರಿಗೆ ಮಾಡಬೇಡ ಎಂದಿದ್ದಾನೆ. ವೀರಶೈವ ಧರ್ಮದಲ್ಲಾದರೂ ಶರಣರು ದಯವಿಲ್ಲದ ಧರ್ಮ ಆವುದಯ್ಯ, ದಯೆಯೇ ಧರ್ಮದ ಮೂಲವಯ್ಯ ಎಂದು ಸಕಲ ಜೀವಿಹಿತವನ್ನು ಭೋದಿಸಿದ್ದಾರೆ. ಹರಿದಾಸರ ಕೀರ್ತನೆಗಳಲ್ಲಿ ಸಹ ಸ್ವಾರ್ಥ ತ್ಯಾಗ, ಸಮಾಜ ಸೇವೆಯ ಬಗ್ಗೆ ಅನೇಕ ಮಾತುಗಳು ಬರುತ್ತವೆ. ಸರ್ವಜ್ಞ ಜಾತಿ ವಿಜಾತಿ ಎನಬೇಡ ಎಂಬ ಸಾಮಾಜಿಕ ಪ್ರಜ್ಞೆಯನ್ನು ಬೋಧಿಸುತ್ತಾನೆ. ಸಂತ ತುಕಾರಾಮ ಜಗತ್ತಿನ ಕಲ್ಯಾಣವೇ ಸಂತನ ಸಂಪತ್ತು ಎಂದಿದ್ದಾನೆ. ಸರ್ವಭೂತಹಿತರತನಾದವನು ಬ್ರಹ್ಮನಿರ್ವಾಣ ಹೊಂದುತ್ತಾನೆ ಎಂಬುದು ಭಗವದ್ಗೀತೆಯ ಸಂದೇಶ. ಹುಟ್ಟಿದ ಮನುಷ್ಯನೊಂದಿಗೇ ನಾಲ್ಕು ಋಣಗಳು ಹುಟ್ಟಿಬರುತ್ತವೆ. ಅದರಲ್ಲಿ ಮನುಷ್ಯ ಋಣ (ಅಥಿತಿ ಸತ್ಕಾರಾದಿಗಳು) ಅಥವಾ ಸಮಾಜಋಣ ಒಂದು. ಮನುಷ್ಯ ಋಣ ಎಂದರೆ ಅತಿಥಿಪೂಜನ ಎಂದು ಮನು ಹೇಳುತ್ತಾನೆ. ಶತಪಥ ಬ್ರಾಹ್ಮಣದಲ್ಲಿಯೂ ಮಹಾಭಾರತದಲ್ಲಿಯೂ ಮನುಷ್ಯಋಣದ ಉಲ್ಲೇಖ ಇದೆ. ಶಂಕರಾಚಾರ್ಯರು ಜೀವನ್ಮುಕ್ತರಿಗೆ  ಸಹ ಸಮಾಜ ಋಣ ಬಿಟ್ಟಿಲ್ಲ ಎಂದು ಹೇಳುತ್ತಾರೆ. ಅಂಥವರು ಸಂಸಾರ ಸಾಗರವನ್ನು ದಾಟಿ ಇತರರನ್ನೂ ಭವಾರ್ಣವದಿಂದ ಉದ್ಧರಿಸಲು ಪ್ರಯತ್ನಿಸಬೇಕು ಎಂದು ಅವರ ವಿವೇಕಚೂಡಾಮಣಿಯಲ್ಲಿ ಇದೆ. ಮಹಾಭಾರತದಲ್ಲಿ ಹಾಗೂ ಮನುಸ್ಮøತಿಯಲ್ಲಿ ಜಗತ್ತಿನ  ಸಕಲ ಜನರ ಹಿತಕ್ಕಾಗಿಯೇ ಧರ್ಮದ ನಿಯಮ ವಿಧಿಸಲ್ಪಟ್ಟಿದೆ ಎಂದು ಹೇಳಿರುವುದುಂಟು. ಯಾವನು ಸಕಲರ ಮಿತ್ರನೋ ಸಕಲರ ಹಿತದಲ್ಲಿಯೇ ನಿರತನಾದವನೋ ಅವನು ಮಾತ್ರ ಧರ್ಮವನ್ನು ತಿಳಿಯಬಲ್ಲ ಎಂದು ಮಹಾಭಾರತದಲ್ಲಿ ಹೇಳಿದೆ. ಹಾಗೂ ಅನ್ನದಾನ ಮಾಡುವವನು (ಹಸಿದವರಿಗೆ) ಜಲದಾನ ಮಾಡುವವನು (ನೀರಡಿಸಿದವರಿಗೆ), ಚಿಕಿತ್ಸೆ ಮಾಡುವವನು (ಆತುರನಿಗೆ) ಈ ಮೂವರೂ ಯಜ್ಞ ಮಾಡದೇ ಸ್ವರ್ಗಕ್ಕೆ ಹೋಗುತ್ತಾರೆ ಎಂದಿದೆ. ಪರೋಪಕಾರವೇ ಪುಣ್ಯ; ಪರಪೀಡೆಯೇ ಪಾಪ ಎಂಬುದು ಕವಿಯೊಬ್ಬನ ಸುಭಾಷಿತ. ಸ್ಕಂದ ಪುರಾಣದಲ್ಲಿ ಧರ್ಮ ಅರ್ಥ ಕಾಮ ಮೋಕ್ಷಗಳಿಗೆ ಆರೋಗ್ಯವೇ ಮೂಲ ಎಂದೂ ಆರೋಗ್ಯದಾನ ಮಾಡುವ ವೈದ್ಯನು ಚತುವರ್ಗ ಪುರುಷಾರ್ಥವನ್ನು ಧಾರೆ ಎರೆದು ಕೊಟ್ಟ ಪುಣ್ಯಕ್ಕೆ ಪಾತ್ರನಾಗುತ್ತಾನೆ ಎಂದು ಹೇಳಿರುವುದು, ಅತಿಶಯೋಕ್ತಿಯಲ್ಲ. ಉದಾರಚರಿತನಿಗೆ ಇಡೀ ಜಗತ್ತೇ ಒಂದು ಕುಟುಂಬ ಎಂದು ಪ್ರಾಚೀನ ಕವಿಯೊಬ್ಬನ ಅಭಿಪ್ರಾಯ. ಯಾರಿಗಾದರೂ ಯಾವುದಾದರೂ ಕಾರಣದಿಂದ ಸುಖವುಂಟಾಗುವಂತೆ ಪ್ರಯತ್ನಿಸುವುದೇ ಈಶ್ವರ ಪೂಜೆ ಎಂದು ಪ್ರಾಚೀನ ಕವಿಯೊಬ್ಬನ ಮತ. ಉಪಕಾರ ಮಾಡಿದವನಿಗೆ ಪ್ರತಿ ಉಪಕಾರ ಮಾಡಬೇಕೆಂಬುದು ಸನಾತನ ಧರ್ಮ. ಅಂತೆಯೇ ಕೃತಘ್ನನಿಗೆ ಪ್ರಾಯಶ್ಚಿತ್ತವೇ ಇಲ್ಲ. ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಧಾರ್ಮಿಕ ವಿಧಾನವನ್ನು ಆಚರಿಸಬೇಕು.

    ನಿಃಸ್ವಾರ್ಥವಾದವನ್ನು ವೇದಗಳಲ್ಲಿ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಋಗ್ವೇದದಲ್ಲಿ ಯಜ್ಞವೇ ಮೊಟ್ಟ ಮೊದಲಿನ ಧರ್ಮವೆಂದು ಹೇಳಿದ್ದು ಸಮಾಜದ ಉನ್ನತಿಗಾಗಿಯೇ. ಯಜ್ಞ ಯಾಗಾದಿಗಳಲ್ಲಿ ಬಡಬಗ್ಗರಿಗೆ ಅನ್ನ ಸಿಗುತ್ತಿತ್ತು. ಬುದ್ಧಿ ಜೀವಿಗಳಿಗೆ ಪ್ರೋತ್ಸಾಹ ಸಿಗುತ್ತಿತ್ತು. (ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯ ವಿಜಯ). ಸಮಾಜಪುರುಷನಿಗೆ ಸಾವಿರಾರು ಕಣ್ಣು, ಸಾವಿರಾರು ಮುಖ, ಬಾಹು ಎಂಬುದು ಋಗ್ವೇದದ ಮಾತು. ಯಜುರ್ವೇದದಲ್ಲಿ ಜಗತ್ತು ಎಲ್ಲವೂ ಭಗವದ್ ವ್ಯಾಪ್ತ ಎಂದೂ ಹೆರವರ ಸೊತ್ತಿಗೆ ಆಶೆಪಡದೆ ಆದಷ್ಟು ತ್ಯಾಗ ಮಡುತ್ತ ಸಮಾಜ ಹಿತಕ್ಕಾಗಿ ನೂರಾರು ವರ್ಷ ಬದುಕಿ ಬಾಳೋಣ ಎಂದು  ಆಶಿಸಬೇಕೆಂದೂ ಕೇವಲ ಆತ್ಮ ವಿಚಾರ ಮಾಡುತ್ತ ಇಹಸುಖವನ್ನು ಕಡೆಗಣಿಸಕೂಡದೆಂದೂ ಕೇವಲ ಭೌತಿಕಕ್ಕೆ ಮರುಳಾಗಿ ಆಧ್ಯಾತ್ಮಿಕವನ್ನು ಅಲಕ್ಷಿಸಬಾರದೆಂದೂ ಹೇಳಿದ್ದುಂಟು (ಯಜುರ್ವೇದದ ಈಶಾವಾಸ್ಯ). ಅಲ್ಲದೇ ಯಜುವೇಧದಲ್ಲಿಯೇ ಈ ರಾಷ್ಟ್ರದಲ್ಲಿರುವ ಸಕಲ ಜನರಿಗೂ ಹಿತವಾಗಲಿ ಎಂಬ ಅಭಿಪ್ರಾಯ ಮಂತ್ರಗಳಿವೆ.(ಕಾಲದಲ್ಲಿ ಮಳೆಯಾಗಿ ಬೆಳೆ ಚೆನ್ನಾಗಿ ಬರಲಿ, ಹಸುಗಳು ಚೆನ್ನಾಗಿ ಹಾಲನ್ನು ಕೊಡಲಿ, ಯುವಕರು ಸಭ್ಯರಾಗಲಿ ಇತ್ಯಾದಿ). ಅಲ್ಲಿಯೇ ತಾನೊಬ್ಬನೇ ಉಪಭೋಗಿಸುವುದು ಪಾಪ ಎಂದಿದೆ. ನನಗೆ, ಆಹಾರ ಪದಾರ್ಥಗಳು ಹೆಚ್ಚು ದೊರಕಲಿ, ಅತಿಥಿ ಅಭ್ಯಾಗತರು ನನ್ನ ಮನೆಗೆ ಬರಲಿ, ನಾನು ದಾನ ಮಾಡುವ ಸ್ಥಿತಿಯಲ್ಲಿಯೇ ಇರುವಂತಾಗಲಿ, ನನಗೆ ಬೇಡುವ ಸ್ಥಿತಿ ಬಾರದಂತೆ ಇರಲಿ, ಎಲ್ಲರೂ ನನ್ನನ್ನು ಮಿತ್ರನೆಂದೇ ಬಗೆಯಲಿ, ನನಗೆ ಯಾರೂ ಶತ್ರುಗಳಾಗದೇ ಇರಲಿ  ಎಂದು ಮುಂತಾದವೂ ಇವೆ. ಸಾಮವೇದದಲ್ಲಿ ನಮ್ಮೆಲ್ಲರಿಗೂ ಭಗವಂತ ಮಂಗಳವನ್ನು ಮಾಡಲಿ ಎಂಬ ಶಾಂತಿಪಾಠ ಇದೆ. ಅಥರ್ವಣವೇದದಲ್ಲಿ ಶೂದ್ರರಿಗೂ ಆರ್ಯರಿಗೂ ನಾನು ಪ್ರಿಯನಾಗಬೇಕು. ಸಮಾಜದ ಸಕಲರ ಮನಸ್ಸೂ ಒಂದೇ ಅಭಿಪ್ರಾಯ ಉಳ್ಳದ್ದಾಗಿರಬೇಕು, ಸಮಾನವಾದ ಅನ್ನಪಾನಾದಿಗಳು ದೊರೆಯಬೇಕು ಇತ್ಯಾದಿ ಆದರ್ಶ ವಿಚಾರಗಳಿವೆ.

    ಜೂಜಾಡಬೇಡ; ಕೃಷಿ ಮಾಡು; ನೂರು ಹಸ್ತಗಳಿಂದ ಗಳಿಸಿ ಸಾವಿರಾರು ಹಸ್ತಗಳಿಂದ ದಾನ ಮಾಡು. ಜಗತ್ತಿನ ಎಲ್ಲರೂ ಸಭ್ಯರಾಗುವಂತೆ ಪ್ರಯತ್ನಿಸು ಎಂಬ ಉಚ್ಚಮಟ್ಟದ ಸಮಾಜ ಹಿತಕಾರಕವಾದ ಉಪದೇಶಗಳು ವೇದಗಳಲ್ಲಿ ಬಂದಿವೆ.
(ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ